ರಾಯಚೋಟಿ (ಆಂಧ್ರಪ್ರದೇಶ): ಜಗತ್ತಿನ ಆದಿಯಲ್ಲಿ ಶಿವಸೃಷ್ಟಿಯ ಅವತಾರವಾದ ಶ್ರೀವೀರಭದ್ರ ದೇವರು ಜನವಿರೋಧಿ ನಕಾರಾತ್ಮಕ ಅಮಂಗಲ ಶಕ್ತಿಗಳ ನಿವಾರಣೆಗೆ ಶ್ರಮಿಸಿ ಎಲ್ಲೆಡೆ ಸಕಾರಾತ್ಮಕ ಕ್ರಿಯಾಪ್ರೇರಕ ಸತ್ಯಧರ್ಮವನ್ನು ಉಳಿಸಿ ಶಿಷ್ಟ ರಕ್ಷಕನಾಗಿದ್ದಾನೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಆಂಧ್ರಪ್ರದೇಶದ ರಾಯಚೋಟಿ ವೀರಭದ್ರ ದೇವರ ದೇವಾಲಯಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬುಧವಾರ ಆಯೋಜಿಸಿದ್ದ ಧರ್ಮ ಸಂಗಮ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ವೀರಶೈವ ಧರ್ಮದ ಗೋತ್ರ ಪುರುಷನೆಂದೇ ಹೆಸರು ಪಡೆದ ಶ್ರೀವೀರಭದ್ರ ದೇವರು ಮನುಕುಲಕ್ಕೆ ಸನ್ನಡತೆಯ ಸಂಸ್ಕಾರ, ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಸಾತ್ವಿಕ ನೈತಿಕ ಶಕ್ತಿ ಸಂಚಯವನ್ನು ಒದಗಿಸಿದ್ದಾನೆ. ಮಾನವನಲ್ಲಿ ಉಂಟಾಗಬಹುದಾದ ಅಹಂಕಾರದಂತಹ ಕುಬ್ಜ ಗುಣಸ್ವಭಾವಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಸಂದೇಶ ಶಾಶ್ವತವಾಗಿ ಮಾನವನ ಇಹದ ಬದುಕಿನ ಸ್ತರಗಳಲ್ಲಿ ಸ್ಪಷ್ಟವಾಗಿ ಉಳಿದುಕೊಂಡಿದೆ ಎಂದರು.
ರಾಯಚೋಟಿ ಕ್ಷೇತ್ರದ ಶ್ರೀವೀರಭದ್ರ ದೇವರು ಅಪಾರ ಶಕ್ತಿಯನ್ನು ಹೊಂದಿದ್ದು, ಭಕ್ತರ ಸತ್ ಸಂಕಲ್ಪಗಳಿಗೆ ಅನುಗುಣವಾಗಿ ಅವರ ಇಷ್ಟಾರ್ಥಗಳನ್ನು ಈಡೇರಿಸಿದ ಅನೇಕ ಸಂಗತಿಗಳು ಈ ಕ್ಷೇತ್ರದ ಚರಿತ್ರೆಯಲ್ಲಿ ಕಾಣಸಿಗುತ್ತವೆ ಎಂದೂ ಕಾಶಿ ಜಗದ್ಗುರುಗಳು ನುಡಿದರು. *ಪೂರ್ಣ ಕುಂಭ ಸ್ವಾಗತ :* ಶ್ರೀವೀರಭದ್ರ ದೇವರ ರಾಯಚೋಟಿ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಗೆ ದೇವಾಲಯದ ಸಮಸ್ತ ಭಕ್ತ ಸಂಕುಲದ ಪರವಾಗಿ ಪೂರ್ಣ ಕುಂಭ ಸ್ವಾಗ ನೀಡಿದ ನಂತರ ರಾಯಚೋಟಿ ನಗರದಲ್ಲಿ ಶೋಭಾ ಧರ್ಮ ಯಾತ್ರೆ ಜರುಗಿತು.
ದೇವಾಲಯದ ಆವರಣದಲ್ಲಿ ಬುಧವಾರ ಪ್ರಾತಃಕಾಲದಲ್ಲಿ ಕಾಶಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತಗಣಕ್ಕೆ ಆಶೀರ್ವದಿಸಿದರು. ನಂತರ ಶ್ರೀವೀರಭದ್ರ ದೇವರಿಗೆ ಹಾಗೂ ಭದ್ರಕಾಳಿ ಅಮ್ಮನವರಿಗೆ ಕಾಶಿ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ರಾಯಚೂರಿನ ವೀರಭದ್ರಪ್ಪ ಅಂತರಗಂಗಿ, ಎ.ಎಸ್.ಪಾಟೀಲ, ಕಲಬುರ್ಗಿಯ ಸಿ.ಎಂ. ಶಿವಶರಣ, ದೇವಾಲಯ ಟ್ರಸ್ಟ್ ಅಧ್ಯಕ್ಷೆ ವಿಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ರಮಣ ರೆಡ್ಡಿ, ಅರ್ಚಕರುಗಳಾದ ಚಂದ್ರಶೇಖರಯ್ಯಸ್ವಾಮಿ, ಶಂಕ್ರಯ್ಯಸ್ವಾಮಿ, ಕೃಷ್ಣಶಾಸ್ತ್ರಿ ಯೋಗೀಶಶಾಸ್ತ್ರಿ ಸೇರಿದಂತೆ ಇತರರು ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಭಕ್ತ ಸಮೂಹ ಆಗಮಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.