ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಜಿಪಂ ಮಾಜಿ ಅಧ್ಯಕ್ಷ ದಿವಂಗತ ಎಂ.ಶ್ರೀನಿವಾಸನ್ ಅವರ ಕೊಲೆಯ ನೈಜತೆಯನ್ನು ಕೆಲವರು ದಿಕ್ಕು ತಪ್ಪಿಸುವ ಹುನ್ನಾರುಗಳು ನಡೆಯುತ್ತಾ ಇದ್ದು ಕೂಡಲೇ ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಸಿಬಿಐ ತನಿಖೆಗೆ ಒಪ್ಪಿಸುವ ಮೂಲಕ ಕೊಲೆಯ ಹಿಂದಿನ ನೈಜತೆಯನ್ನು ಹೊರಗೆ ತರಬೇಕಾಗಿದೆ ಎಂದು ದಿವಂಗತ ಎಂ. ಶ್ರೀನಿವಾಸನ್ ಅವರ ಪತ್ನಿ ಡಾ.ಚಂದ್ರಕಲಾ ಅವರು ಮಡಿಲು ಹಿಡಿದು ಸರಕಾರವನ್ನು ಅಂಗಲಾಚಿದರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಛೇರಿ ಮುಂದೆ ಶನಿವಾರ ವಿವಿಧ ಧರ್ಮಗುರುಗಳು ಹಾಗೂ ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ದಿವಂಗತ ಎಂ. ಶ್ರೀನಿವಾಸನ್ ಅವರ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ನಡೆಯುವ ಕೊಲೆಗಳಿಗೆ ಅಂತ್ಯ ಕಾಣಬೇಕಾಗಿದೆ. ಕೊಲೆಯ ಹಿಂದಿರುವ ಸಂಚುಕೋರರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಈ ಕೇಸ್ ನನ್ನ ಮತ್ತು ನಮ್ಮ ಕುಟುಂಬದ ಪ್ರಶ್ನೆಯಲ್ಲ ತಾಲೂಕಿನ ಸ್ವಾಭಿಮಾನಿಗಳ ಪ್ರಶ್ನೆಯಾಗಿದೆ ನ್ಯಾಯ ಪಡೆಯಲು ಸಿಬಿಐನಿಂದ ಮಾತ್ರ ಸಾಧ್ಯವಾಗಿದೆ ನ್ಯಾಯ ಪರವಾದ ಬದುಕಿಗೆ ಜೀವ ತನ್ನಿ ಎಂದು ಸಂಬಂಧಿಸಿದ ಇಲಾಖೆ ಹಾಗೂ ಸರಕಾರದ ಭಾಗವನ್ನು ಮನವಿ ಮಾಡಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ನಾನು ವೈದ್ಯೆಯಾಗಿ ನನ್ನ ಕೈಯಿಂದಲೇ ಎಷ್ಟೋ ಜೀವಗಳನ್ನು ಉಳಿಸಿದ್ದೇನೆ ಆದರೆ ನನ್ನ ಗಂಡನನ್ನು ಈ ರೀತಿಯಲ್ಲಿ ನೋಡುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ . ಈ ಕೇಸ್ ನಲ್ಲಿ ಕೆಲವರು ಸುಳ್ಳು ಹೇಳಿಕೆಗಳನ್ನು ಈಗಾಗಲೇ ಕೊಟ್ಟಿದ್ದಾರೆ ಹೆಣ್ಣಿನ ಶಕ್ತಿಯೇ ನ್ಯಾಯದ ಶಕ್ತಿಯಾಗಿದ್ದು ಕೊಲೆಯ ಹಿಂದಿನ ಸಂಚುಕೋರರನ್ನು ಪತ್ತೆ ಹಚ್ಚಬೇಕು ಎಂಬುದನ್ನು ನಮ್ಮ ಎಲ್ಲರ ಒತ್ತಾಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಗದ್ಗುರು ಛಲವಾದಿ ಮಹಾಗುರುಪೀಠ ಚಿತ್ರದುರ್ಗದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ.2024ರ ಪ್ರಾರಂಭದಲ್ಲಿ ಸಂಭ್ರಮ ಪಡುವುದು ಬಿಟ್ಟು ಶ್ರದ್ಧಾಂಜಲಿ ಮಾಡಬೇಕಾದ ಪರಿಸ್ಥಿತಿ ನಮ್ಮಗಳ ಮುಂದೆ ಬಂದಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದವರಿಗೆ ಕಾನೂನು ಮೂಲಕ ಶಿಕ್ಷೆಯಾಗುವಂತೆ ಮಾಡಬೇಕು ಜೊತೆಗೆ ಇದರ ಹಿಂದೆ ಇರುವ ಕಾಣದ ಕೈಗಳು ಕೆಲಸ ಮಾಡಿದ್ದು ಗುರುಪೀಠವು ಸಹ ಕೇಸ್ ಅನ್ನು ಕೂಡಲೇ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ದಲಿತ ಸಂಘಟನೆಯ ಹಿರಿಯ ಮುಖಂಡ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ಅವರ ನೆಲೆಸಿದ ದೇಶದಲ್ಲಿ ಹಿಂಸೆ, ಅಶಾಂತಿಗಳು ನಡೆಯುತ್ತಾ ಇದ್ದು ಹಿಂಸೆಗೆ ಕೊಲೆಗಳು ಪರ್ಯಾಯವಲ್ಲ ಎಂಬುದನ್ನು ಸಮಾಜಕ್ಕೆ ಸಾರಿ ಹೇಳಬೇಕಾಗಿದೆ ಪ್ರೀತಿ, ಸಂಬಂಧ, ಅನುಭಂದಗಳು ಮತ್ತೆ ಮರುಕಳಿಸಬೇಕಾಗಿದೆ ಎಂ. ಶ್ರೀನಿವಾಸನ್ ಅವರ ಕೊಲೆಯೇ ಕೊನೆಯಾಗಬೇಕು ಅವರು ನಮ್ಮೆಲ್ಲರ ಮಧ್ಯೆ ಚಿರಕಾಲವಾಗಿ ಉಳಿಯುಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಮಹಾಸಂಸ್ಥಾನ ಕಲ್ಕೆರೆ ಮಠದ ತಿಪ್ಪೇರುದ್ದ ಸ್ವಾಮಿ, ತುರುವೇಕೆರೆಯ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಿಪಬ್ಲಿಕ್ ಪಾರ್ಟಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ತಾಪಂ ಮಾಜಿ ಸದಸ್ಯ ಕೆ.ಕೆ ಮಂಜುನಾಥ್ ಮಾತನಾಡಿದರು. ವಿವಿಧ ಪಕ್ಷಗಳ ನಾಯಕರು ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.