(www.vknews. in) ; ಮಕ್ಕಾ ಯಾತ್ರೆ ಮುಗಿಸಿ ಬಂದವರಿಗೆ “ಹಾಜೀ” ಎಂಬ ಪದವಿ ನಾಮದಿಂದ ಕರೆಯುವುದು ಸಮುದಾಯ ಅವರಿಗೆ ನೀಡುವ ಒಂದು ಗೌರವ. ಇಂದಿನ ಕಾಲದಲ್ಲಿ ಹಜ್ಜ್ ಯಾತ್ರೆ ಕಾಮನ್ ಆಗಿರುವುದರಿಂದ ಈ “ಹಾಜೀ” ಎಂಬ ವಿಶೇಷ ಹೆಸರಿನಿಂದ ಕರೆಯುವುದು ಕಡಿಮೆಯಾಗ ತೊಡಗಿದೆ. ಆದರೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಅಬ್ದುಲ್ ಖಲೀಲ್ ಯಾನೆ ನೌಶಾದ್ ಎಂಬ ಯುವಕನ ಹಜ್ಜ್ ಯಾತ್ರೆ ಮಾತ್ರ ವಂಡರ್. ಈ ಸಾಹಸಿ ಯುವಕನನ್ನು “ಅಲ್ ಹಾಜ್” ಎಂದು ಕರೆಯುವುದು ಬಹಳ ಅರ್ಥಪೂರ್ಣವಾಗಿದೆ.
ಇವರು 8130 ಕಿ.ಮೀ. ಕಾಲ್ನಡೆಯಾಗಿ ಮಕ್ಕಾಕ್ಕೆ ತಲುಪಿದ್ದು ನಿಜಕ್ಕೂ ಒಂದು ಸಾಹಸಗಾಥೆ. ಕಳೆದ ವರ್ಷ (2023) ಜನವರಿ 30 ರಂದು ನಡೆ ಆರಂಭಿಸಿದ್ದ ಇವರು ಸತತವಾಗಿ ಒಂದು ವರ್ಷ, ಎರಡು ದಿನಗಳ ಕಾಲ ಭಾರತದ ಪಂಜಾಬ್ ವರೆಗೂ ಅಲ್ಲಿಂದ ಪಾಕಿಸ್ತಾನ, ಒಮಾನ್, ಯುಎಇ ದೇಶಗಳನ್ನು ದಾಟಿ ಸೌದಿ ಅರೇಬಿಯಾದ ಪವಿತ್ರ ಮಕ್ಕಾಕ್ಕೆ ತಲುಪಿದ್ದರು. ಉಮ್ರಾ ನಿರ್ವಹಿಸಿದ ಬಳಿಕ ಹಜ್ಜ್ ಗಾಗಿ ಅಲ್ಲೇ ಐದು ತಿಂಗಳು ಕಾದು ನಿಂತು ಇದೀಗ ಮೊನ್ನೆ ಹಜ್ಜ್ ಕರ್ಮವನ್ನೂ ಪೂರೈಸಿ ಮರಳಿ ಬಂದಿದ್ದಾರೆ.
ಸೌದಿ ಸರಕಾರದ ಉಚಿತ ಟಿಕೆಟ್ ಮುಖಾಂತರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇವತ್ತು ಬಂದಿಳಿದಾಗ ನಾವು ಅವರನ್ನು ಬರಮಾಡಿಕೊಳ್ಳಲು ಹೋಗಿದ್ದೆವು. ಕಣ್ಣೂರು ಎಜ್ಯುಕೇಶನ್ ಟ್ರಸ್ಟ್ ಸೆಕ್ರೆಟರಿ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಮೋಟಿವೇಶನ್ ತರಗತಿಗಾರರಾದ ರಫೀಖ್ ಮಾಸ್ಟರ್, ಜಿಲ್ಲಾ ವಕಫ್ ಬೋರ್ಡ್ ಅಧ್ಯಕ್ಷ ಲಕ್ಕಿ ಸ್ಟಾರ್ ಅಬ್ದುನ್ನಾಸಿರ್, ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ವಕಫ್ ಬೋರ್ಡ್ ಸದಸ್ಯ ಸಅದುದ್ದೀನ್, ನೌಶಾದ್ ಹಾಜಿ ಚಾರಿಟೇಬಲ್ ಸೆಕ್ರಟರಿ ಡಾಕ್ಟರ್ ಅಬೂಬಕರ್ ಸಿದ್ಧೀಖ್, ಹಾಗೂ ವಿನೀತನಾದ ನಾನು ಸೇರಿದ ತಂಡ ಅಲ್ ಹಾಜ್ ಅಬ್ದುಲ್ ಖಲೀಲ್ ರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ನೀಡಿ ಬರಮಾಡಿಕೊಂಡೆವು. ಬೇರೆ ಅನೇಕ ಅಭಿಮಾನಿಗಳೂ ಹಾಜರಿದ್ದರು. ಅಭಿನಂದಿಸುತ್ತಾ ರಫೀಖ್ ಮಾಸ್ಟರ್ ಹೇಳಿದ ಒಂದು ಮಾತು ಹೃದಯಸ್ಪರ್ಶಿ ಯಾಗಿತ್ತು.
“ನಾವೆಲ್ಲ ಪಕ್ಕದ ಮಸೀದಿಗೂ ಕೂಡಾ ವಾಹನದಲ್ಲಿ ಹೋಗಿ ವಾಯುಮಾಲಿನ್ಯ ಮತ್ತು ಜಾಗದ ಅಡಚಣೆ ಸೃಷ್ಟಿಸುತ್ತೇವೆ. ಅಂತದರಲ್ಲಿ ಈ ಯುವಕ ಎಂಟು ಸಾವಿರ ಕಿ.ಮೀ. ನಡೆದು ಮಕ್ಕಾಕ್ಕೆ ಹೋಗಿದ್ದಾರೆ. ಕನಿಷ್ಠ ಪಕ್ಷ ನಾವು ನಮ್ಮ ಪಕ್ಕದ ಮಸೀದಿಗಾದರೂ ಕಾಲ್ನಡೆಯಾಗಿ ಹೋಗಿ ಪೊಲೂಶ್ಯನ್ ಹಾಗೂ ಅಡಚಣೆ ಸೃಷ್ಟಿ ಮಾಡದಂತೆ ನೋಡಿಕೊಳ್ಳಬೇಕಾಗಿದೆ”
ಕೇರಳದಿಂದ ಕಾಲ್ನಡೆಯಾಗಿ ಹೋಗಿದ್ದ ಶಿಹಾಬ್ ಚೋಟೂರು ಎಂಬ ಯುವಕ ಕಾಲ್ನಡೆ ಆರಂಭಿಸುವಾಗಲೇ ಯೂಟ್ಯೂಬ್ ನಲ್ಲಿ ಪ್ರಚಾರ ಆರಂಭಿಸಿದ್ದರಿಂದ ಅವರ ಯಾತ್ರೆ ದೊಡ್ಡ ಸುದ್ಧಿಯೂ ಜೊತೆಗೆ ವಿವಾದವೂ ಉಂಟಾಗಿತ್ತು. ಆದರೆ ಅಬ್ದುಲ್ ಖಲೀಲ್ ಅವರ ಯಾತ್ರೆ ಇಂತಹ ಪ್ರಚಾರಕ್ಕೂ ವಿವಾದಕ್ಕೂ ಆಸ್ಪದ ಕೊಡದೆ ಇರುವುದು ಒಂದು ವಿಶೇಷ. ಕರ್ನಾಟಕ ರಾಜ್ಯದಿಂದಲೇ ಮಕ್ಕಾಕ್ಕೆ ಕಾಲ್ನಡೆಯಾಗಿ ಹೋದ ಪ್ರಥಮ ವ್ಯಕ್ತಿ ಎಂಬ ಕೀರ್ತಿಯೂ ಇವರದ್ದಾಗಿದೆ.
ಈ ಯುವಕನ ನಿಯ್ಯತ್ತು, ಛಲ, ಕೃತ ನಿಶ್ಚಯಕ್ಕೆ ನಾವು ತಲೆದೂಗಲೇ ಬೇಕಾಗಿದೆ. ಅಲ್ಲಾಹು ಸ್ವೀಕರಿಸಲಿ. ಅವರಿಗೂ ಅವರ ಕುಟುಂಬಕ್ಕೂ ಬರಕತ್ತಾಗಲಿ. ನಿಜವಾಗಿಯೂ ಹಾಜಿ ಅಬ್ದುಲ್ ಖಲೀಲ್ ಯಾನೆ ನೌಶಾದ್ ಹಾಜಿ ಗ್ರೇಟ್.
ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.