(www.vknews.in) ; (ಉಸ್ತಾದರ ವಫಾತಿಗೆ 24 ವರ್ಷ ತುಂಬುವಾಗ ಅವರ ಜೀವನ,ಭೋದನೆಗಳತ್ತ ಒಂದು ಇಣುಕು ನೋಟ.) ಅಬೂ ಆಶಿಕ್ K.A.M. ಶಬೀರ್ ಅಶ್’ಅರಿ ಹಂದಾನಿ ಅಲ್ ಫುರ್ಖಾನಿ, ಹಿದಾಯತ್ ನಗರ ,ಕೆ.ಸಿ.ರೋಡು.* (ಮ್ಯಾನೇಜರ್ : ದಾರುನ್ನಜಾತ್ ,ಚಿನಾಲ)
ಕಕ್ಕಿಂಜೆ ಎಂ.ಎಸ್.ಮೂಸಾ ಮುಸ್ಲಿಯಾರ್ ! ಈ ಹೆಸರು ಕೇಳದವರು ಬಹಳ ವಿರಳ,ಒಂದು ಕಾಲದ ಮತಪ್ರವಚನ ವೇದಿಕೆಗಳ ತುಂಬು ಸಾನಿಧ್ಯ,ಆಳವಾದ ಪಾಂಡಿತ್ಯ, ಸತ್ಯವನ್ನು ಯಾರ ಮುಂದೆಯೂ ಮುಚ್ಚುಮರೆಯಿಲ್ಲದೆ ಹೇಳಬಲ್ಲ ಧೈರ್ಯಶಾಲಿ,ದೀನೀ ವಿಷಯದಲ್ಲಿ ಯಾರೊಂದಿಗೂ ರಾಜಿ ಇಲ್ಲದ ವ್ಯಕ್ತಿತ್ವ, ಸುದೀರ್ಘ ನಾಲ್ಕು ದಶಕಗಳ ಸಾರ್ಥಕ ದೀನಿ ಸೇವೆ,ಉಭಯ ಸಮಸ್ತದ ಘಟಾನುಘಟಿ ಉಲಮಾ ದಿಗ್ಗಜರ ಶಿಷ್ಯತ್ವ ಸ್ವೀಕರಿಸಿದ ಹಿರಿಮೆ, ತಸವ್ವುಫ್’ನಲ್ಲೂ ಎತ್ತಿದ ಕೈ, ಜನಮಾನಸದಲ್ಲಿ ಮಾಯದೆ ಉಳಿಯಲು ಇನ್ನೇನು ಬೇಕು ?
ಹೌದು ! ಪ್ರಸಿದ್ದ ವಿದ್ವಾಂಸರಾಗಿ,ಸೂಫಿ ವರ್ಯರಾಗಿ,ಪ್ರಖ್ಯಾತ ವಾಗ್ಮಿಯಾಗಿ,ಮತಪ್ರವಚನ ವೇದಿಕೆಗಳ ತುಂಬು ಸಾನಿಧ್ಯವಾಗಿ,ನಾಲ್ಕು ದಶಕಗಳ ದೀನೀ ಸೇವೆಯಿಂದ ಹಲವಾರು ವಿದ್ವಾಂಸರನ್ನು ಸಮುದಾಯಕ್ಕೆ ಸಮರ್ಪಿಸಿದ ಗುರುವಾಗಿ,ರಾಜ್ಯದ ಹಿರಿಯ ಪ್ರಮುಖ ಉಲಮಾಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ, *ಉಸ್ತಾದ್ ಮರ್ಹೂಂ ಶೈಖುನಾ ಕಕ್ಕಿಂಜೆ ಎಂ.ಎಸ್.ಮೂಸಾ ಮುಸ್ಲಿಯಾರ್ (ನ.ಮ)* ಜನನ: ಸುಳ್ಯ ತಾಲೂಕಿನ ಜಾಲ್ಸೂರು ಸಮೀಪದ ಕನಕಮಜಲು,ಸುಣ್ಣಮೂಲೆಯಲ್ಲಿ ಸಾತ್ವಿಕರಾದ ಮುಹಮ್ಮದ್ – ಹಲೀಮ ದಂಪತಿಯ ಎರಡನೇ ಪುತ್ರನಾಗಿ ಜನಿಸಿದರು. ಶಾಲಾ ವಿದ್ಯಾಭ್ಯಾಸ ಕೇವಲ ಪ್ರಾಥಮಿಕ ತರಗತಿ ಮಾತ್ರವಾದರೂ ಲೆಕ್ಕ ಹಾಗೂ ಇತರ ವಿಷಯಗಳಲ್ಲಿ ಬಹಳ ಚುರುಕಾಗಿದ್ದರು,
ಸಣ್ಣ ಪ್ರಾಯದಲ್ಲೇ ದರ್ಸ್’ಗೆ ಸೇರಿದ ಉಸ್ತಾದರು, ಹಲವಾರು ವರ್ಷ ದರ್ಸ್ ಕಲಿತಿದ್ದಾರೆ,ದರ್ಸ್ ಕಲಿಕೆಯ ಮಧ್ಯೆ ಬಡತನದ ಬೇಗೆಯಿಂದ ಒಂದೊಮ್ಮೆ ದರ್ಸ್ ಬಿಡುವ ಸಂದರ್ಭ ಎದುರಾದಾಗ ತನ್ನ ಉಸ್ತಾದರಾದ ಕೆ.ಕೆ.ಅಬೂಬಕ್ಕರ್ ಹಝ್ರತ್ ಎಂಬ ಮಹಾನರು ದರ್ಸ್ ಮುಂದುವರಿಸಲು ಹಾಗೂ ಈ ಕ್ಷೇತ್ರದಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಲು ಉಸ್ತಾದರಿಗೆ ಪ್ರೇರಕ ಶಕ್ತಿಯಾಗಿದ್ದರು. ವಿದ್ಯಾಭ್ಯಾಸವನ್ನು ಹೆಚ್ಚಾಗಿ ಕೇರಳದ ಮಲಪ್ಪುರಂ ಜಿಲ್ಲೆಯಲ್ಲೇ ಮುಂದುವರಿಸಿ,ಕೊನೆಗೆ ಉಳ್ಳಾಲಕ್ಕೆ ಬಂದು ತಾಜುಲ್ ಉಲಮಾರ ಶಿಷ್ಯತ್ವವನ್ನೂ ಸ್ವೀಕರಿಸಿದ್ದರು,ತಾಜುಲ್ ಉಲಮಾರ ನಿರ್ದೇಶ ಪ್ರಕಾರವಾಗಿತ್ತು ಕಾಸರಗೋಡು ಜಿಲ್ಲೆಯ ದೇಲಂಪಾಡಿಯಲ್ಲಿ ಮುದರ್ರಿಸ್ ಆಗಿ ನೇಮಕಗೊಂಡದ್ದು,ದೇಲಂಪಾಡಿಯಲ್ಲಿ ಮೊದಲು ದರ್ಸ್ ಆರಂಭಿಸಿದ್ದೇ ಮೂಸಾ ಉಸ್ತಾದರಾಗಿದ್ದರು.
ಎಲ್ಲ ಫನ್ನ್’ಗಳಲ್ಲೂ ಬಹಳ ಪಾಂಡಿತ್ಯವಿದ್ದ ಉಸ್ತಾದರು,ಆ ಕಾಲದ ದೊಡ್ಡ ಮುದರ್ರಿಸ್ಸರಾಗಿದ್ದರು, ಹಲವಾರು ‘ಮುತಅಲ್ಲಿಂ’ ಗಳಿರುವ ಪ್ರಮುಖ ದರ್ಸ್’ಗಳಲ್ಲಿ ಒಂದಾಗಿತ್ತು ಉಸ್ತಾದರ ದರ್ಸ್, ತಖ್ವಾ ಹಾಗೂ ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡಿದ್ದರಲ್ಲದೆ,ಅವರೊರ್ವ ಅಪ್ಟಟ ‘ಆಶಿಕ್’ ಆಗಿದ್ದರು,ಮದೀನಾ ದಿಂದ ತಂದ ಹಸಿರು ಶಾಲನ್ನು ಹತ್ತಿರದ ಸಂಬಂಧಿಯೊಬ್ಬರು ಉಡುಗೊರೆಯಾಗಿ ನೀಡಿದಾಗ ‘ಮದೀನಾದಿಂದ ತಂದದ್ದು’ ಎಂಬ ನೆಲೆಯಲ್ಲಿ ಶಾಲನ್ನು ಮುಖಕ್ಕೆ ಅದುಮಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.
ಸತ್ಯವನ್ನು ಯಾರ ಮುಂದೆಯೂ ಸಧೈರ್ಯದಿಂದ ಹೇಳಬಲ್ಲ ಆಲಿಮ್ ಆಗಿದ್ದರು,ದೀನಿ ವಿಷಯದಲ್ಲಿ ಬಹಳ ಸ್ಟ್ರಾಂಗ್ ಆಗಿದ್ದರೂ ವೈಯಕ್ತಿಕವಾಗಿ ಬಹಳ ಮೃದು ಸ್ವಭಾವದವರಾಗಿದ್ದರು. ಅತಿಥಿ ಸತ್ಕಾರದಲ್ಲೂ ಉಸ್ತಾದ್ ಬಹಳ ಮುಂಚೂಣಿಯಲ್ಲಿದ್ದರು,ಕಕ್ಕಿಂಜೆ ಮಸೀದಿಯಲ್ಲಿ ಒಂಭತ್ತು ವರ್ಷಗಳ ಕಾಲ ಮುದರ್ರಿಸ್ ಆಗಿ ಸೇವೆಸಲ್ಲಿಸಿದ ಸಮಯದಲ್ಲಿ ಪ್ರತಿ ಶುಕ್ರವಾರ ಜುಮಾ ನಂತರ ಮನೆಗೆ ಬರುವಾಗ ಮಸೀದಿಯಲ್ಲಿದ್ದ ‘ಮುಸಾಫಿರ್’ಗಳನ್ನು ಊಟಕ್ಕೆ ಜೊತೆಗೆ ಕರೆದುಕೊಂಡು ಬರುತ್ತಿದ್ದರು, ಮನೆಗೆ ಬಂದ ಕುಟುಂಬಿಕರು ಹಾಗೂ ಇತರ ಅತಿಥಿಗಳನ್ನೂ ಬಹಳ ಪ್ರೀತಿ ಆಧರಗಳಿಂದ ಸತ್ಕರಿಸುತ್ತಿದ್ದರು,ಮುತಅಲ್ಲಿಂ’ಗಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು.
ಜಮಾಅತಿನಲ್ಲಿ ಎಂತಹ ಜಟಿಲ ಸಮಸ್ಯೆ ಬಂದರೂ ತನ್ನ ಒಂದು ಪ್ರಸಂಗದ ಮೂಲಕವೇ ಪರಿಹರಿಸುತ್ತಿದ್ದರು, ಉಸ್ತಾದರು ಸೇವಾ ನಿರತರಾಗಿದ್ದ ಒಂದು ಜಮಾಅತಿನಲ್ಲಿ ‘ಗ್ರೂಪಿಸಂ’ ತರ್ಕ ತಾರಕಕ್ಕೇರಿ ಎರಡೂ ವಿಭಾಗದಿಂದ ‘ಕತ್ತಿಕುತ್ತು’ ನಡೆಯುವ ಸಂದರ್ಭ ಎದುರಾದಾಗ ಪರಿಹಾರ ಮಾಡಲು ಕುಂಬೋಳ್ ಆಟಕ್ಕೋಯ ತಂಙಳ್ ರನ್ನು ಕರೆಸುವುದಾಗಿ ಸಮಿತಿ ತೀರ್ಮಾನಿಸಿತ್ತು,ಆದರೆ ಕಾರಣಾಂತರಗಳಿಂದ ತಂಙಳ್’ಗೆ ಬರಲಾಗಲಿಲ್ಲ , ಆ ಸಂದರ್ಭದಲ್ಲಿ ಆ ವಿಷಯವನ್ನು ಉಸ್ತಾದರೆ ಕೈಗೆತ್ತಿಕೊಂಡು ಜುಮಾ ನಮಾಝ್’ನ ನಂತರ ಮಾಡಿದ ಒಂದು ಅದ್ಬುತ ಪ್ರಭಾಷಣ,ಇರು ವಿಭಾಗವನ್ನು ಪರಸ್ಪರ ಪ್ರೀತಿಯಿಂದ ಅಪ್ಪಿಕೊಳ್ಳುವಂತೆ ಮಾಡಿತ್ತು, ವಿಷಯವರಿತ ತಂಙಳ್ ಹೇಳಿದ್ದರಂತೆ ಮೂಸಾ ಮುಸ್ಲಿಯಾರ್ ಇರುವಾಗ ನನ್ನ ಅಗತ್ಯವಿಲ್ಲವೆಂದು.
ಉಸ್ತಾದರ ಜೀವನ ಬಹಳ ಸರಳವಾಗಿತ್ತು,ಐಹಿಕ ವಿಷಯಕ್ಕೆ ಯಾವುದೇ ಪ್ರಾಧಾನ್ಯತೆ ನೀಡದೆ ಪಾರತ್ರಿಕ ಬದುಕಿಗೆ ಹೆಚ್ಚು ಮಹತ್ವ ನೀಡುತ್ತಿದ್ದರು,ಫೋಟೊ ವಿಷಯದಲ್ಲೂ ಯಾವುದೇ ಆಸಕ್ತಿ ತೋರ್ಪಡಿಸದ ಉಸ್ತಾದರು ಮದುವೆ ಮಂಟಪದಲ್ಲಿ ಯಾರಾದರೂ ಫೋಟೊ ತೆಗೆಯುವುದು ಕಂಡರೆ ಮುಖಕ್ಕೆ ಕೈ ಅಡ್ಡಲಾಗಿ ಇಡುತ್ತಿದ್ದರು. ವಹಿಸಿದ ಪದವಿ: ‘ಜಂಇಯ್ಯತ್ತುಲ್ ಉಲಮಾ’ ಆರಂಭ ಕಾಲದಲ್ಲಿ, (ಕರ್ನಾಟಕ ಜಂಇಯ್ಯತ್ತುಲ್ ಉಲಮಾ ಆಗ ಅಸ್ತಿತ್ವಕ್ಕೆ ಬಂದಿರಲಿಲ್ಲ) ಕಟ್ಟಿ ಬೆಳೆಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದವರು,ಮಾತ್ರವಲ್ಲದೆ ‘ಜಂಇಯ್ಯತ್ತುಲ್ ಉಲಮಾ’ ಇದರ ಬೆಳ್ತಂಗಡಿ ತಾಲೂಕು ಘಟಕದ ಮೊದಲ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಕ್ಕಿಂಜೆ ಜಮಾಅತಿನ ಅಧೀನದಲ್ಲಿ ‘ಖುತುಬಿಯ್ಯತ್ತುಲ್ ಅನ್ವರಿಯಾ ಸಮಿತಿ’ ಸ್ಥಾಪಿಸಿ ಸುದೀರ್ಘ 25 ವರ್ಷಗಳ ಕಾಲ ಅದರ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಪ್ರತಿಮ ವಾಗ್ಮಿಯಾಗಿದ್ದ ಉಸ್ತಾದರು, ಕಾಜೂರಿನಲ್ಲಿ ಸೈಯ್ಯದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಇರುವ ಸಮಯದಲ್ಲಿ ಸುದೀರ್ಘ ಹದಿನೆಂಟು ವರ್ಷಗಳ ಕಾಲ ಕಾಜೂರು ಉರೂಸಿನಲ್ಲಿ ನಿತ್ಯ ಪ್ರವಚನಕಾರರಾಗಿದ್ದರು. ‘ಅಬೂ ರಶೀದ್’ ಎಂ.ಎಸ್. ಮೂಸಾ ಮುಸ್ಲಿಯಾರ್ ಎಂಬ ನಾಮದಲ್ಲಿ ಬಹಳ ಪ್ರಖ್ಯಾತಿಯನ್ನು ಪಡೆದಿದ್ದ ಅವರು ಆ ಕಾಲದ ದೊಡ್ಡ ‘ವಾಯಿಳ್’ ಆಗಿದ್ದರು.
ನಾನು ಕಕ್ಕಿಂಜೆ ಎಂ.ಎಸ್. ಮೂಸಾ ಮುಸ್ಲಿಯಾರ್ ರವರ ‘ವಯಳ್’ ಕೇಳಿ ನಮಾಜ್ ಮಾಡಲು ಕಲಿತದ್ದೆಂದು ಒಬ್ಬರು ತನ್ನ ಬಳಿ ಹೇಳಿದ್ಜನ್ನು ‘ತಾಜುಲ್ ಫುಖಹಾಅ್’ ಬೇಕಲ್ ಉಸ್ತಾದ್ ,ವರ್ಷಗಳ ಹಿಂದೆ ಮಿತ್ತೂರು ಕೆ.ಜಿ.ಎನ್. ಸಮ್ಮೇಳನದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.ಇದು ಮೂಸಾ ಉಸ್ತಾದರ ‘ವಯಳ್’ ಜನರೆಡೆಯಲ್ಲಿ ಎಷ್ಟು ಪರಿಣಾಮ ಬೀರಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಅದೇ ರೀತಿ ಖಬರ್ ನಲ್ಲಿ ಮಯ್ಯತ್’ನ್ನು ಖಿಬ್ಲಾಕ್ಕೆ ಅಭಿಮುಖವಾಗಿ ಸರಿಸಿ ಮಲಗಿಸಬೇಕು ಎಂಬುದನ್ನು ಕಲಿತದ್ದು ಕಕ್ಕಿಂಜೆ ಮೂಸಾ ಉಸ್ತಾದರಿಂದ,ಅದಕ್ಕಿಂತ ಮೊದಲು ಎಲ್ಲರನ್ನು ನೇರವಾಗಿಯೇ ಮಲಗಿಸುತ್ತಿದ್ದುದ್ದೆಂದು ಖಬರ್ ತೋಡುವವರೊಬ್ಬರ ಮಾತನ್ನು ಇಲ್ಲಿ ನೆನಪಿಸಬಹುದಾಗಿದೆ . ಮಹಾತ್ಮರೊಂದಿಗಿನ ಬಂಧ: ಮೂಡಿಗೆರೆ ಬದ್ರಿಯ್ಯೀನ್ ಕೇಂದ್ರ ಜುಮ್ಮಾ ಮಸ್ಜಿದ್’ನಲ್ಲಿ ದೀರ್ಘ ಹದಿನಾಲ್ಕು ವರ್ಷಕ್ಕಿಂತಲೂ ಅಧಿಕ ಕಾಲ ಮುದರ್ರಿಸರಾಗಿದ್ದ ಸಮಯದಲ್ಲಿ ಜಾವಗಲ್ ಬಾಬ (ಖ.ಸಿ) ರವರೊಂದಿಗೆ ಬಹಳ ಹತ್ತಿರದ ಬಾಂಧವ್ಯವನ್ನು ಹೊಂದ್ದಿದ್ದರು.
ಮೂಸಾ ಉಸ್ತಾದರ ವಫಾತಿನ ನಂತರ ,ಒಮ್ಮೆ ಕಕ್ಕಿಂಜೆಯ ಜಬ್ಬಾರ್ ಮದನಿ ಎಂಬವರು ಮಹಾನರಾದ ಜಾವಗಲ್ ಬಾಬರನ್ನು ಭೇಟಿಯಾಗಲು ಹೋದಾಗ ‘ಕಕ್ಕಿಂಜೆ ಮೂಸಾ ಮುಸ್ಲಿಯಾರ್ ಗೆ’ ನನ್ನದೊಂದು ಅಸ್ಸಲಾಮು ಅಲೈಕುಂ ಹೇಳಿ ಎಂದಾಗ, ಮೂಸಾ ಉಸ್ತಾದ್ ವಫಾತ್ ಆದ ವಿಷಯ ತಿಳಿಸಿದರು, ತಕ್ಷಣವೇ ಜಾವಗಲ್ ಬಾಬರವರು ಮೂಸಾ ಮುಸ್ಲಿಯಾರ್ ವಫಾತಾದರಾ ? ವಫಾತಾದರಾ ? ಎಂದು ಎರಡು ಸಲ ಕೇಳಿ ಬಹಳ ದುಃಖ ಪಟ್ಟಿದ್ದರಂತೆ, ಇದು ಅವರಿರ್ವರ ಆತ್ಮೀಯ ಬಂಧಕ್ಕೊಂದು ಉದಾಹರಣೆಯಾಗಿದೆ.
ಈ ಕಾಲದಲ್ಲಿ ಉಸ್ತಾದರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್, ಶಂಶುಲ್ ಉಲಮಾ ಈ.ಕೆ.ಉಸ್ತಾದ್ , ಜಾವಗಲ್ ಬಾಬರ ಬಳಿ ಹೋಗುವ ಮಿಕ್ಕ ಸಂದರ್ಭಗಳಲ್ಲಿ ತನ್ನ ಪ್ರೀತಿಯ ಶಿಷ್ಯ ಇರುವ ಮೂಡಿಗೆರೆ ಮಸೀದಿಗೆ ಬಂದು ಮೂಸಾ ಉಸ್ತಾದರ ರೂಮಿನಲ್ಲಿ ವಿಶ್ರಾಂತಿ ಪಡೆದು ಹೋಗುತ್ತಿದ್ದರು,ತಾಜುಲ್ ಉಲಮಾ ಹಾಗೂ ಶಂಸುಲ್ ಉಲಮಾ’ರಿಗೆ ಮೂಸಾ ಉಸ್ತಾದರೊಂದಿಗೆ ಪ್ರತ್ಯೇಕ ಪ್ರೀತಿ ಇತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ. ಉಸ್ತಾದರುಗಳು: ಸಮಸ್ತದ ಘಟಾನುಘಟಿ ನಾಯಕರುಗಳಾದ ಸೈಯ್ಯದುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ.ಸಿ), ಪಾನೂರು ಪೂಕೋಯ ತಂಙಳ್ (ಖ.ಸಿ), ಶಂಶುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ), ಬಹ್ರುಲ್ ಉಲೂಂ ಓ.ಕೆ. ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ ಒದುಕ್ಕುಂಙಲ್ (ಖ.ಸಿ), ಕೆ.ಕೆ ಅಬೂಬಕ್ಕರ್ ಹಝ್ರತ್ (ಖ.ಸಿ), ಕೆ.ಕೆ.ಸ್ವದಖತುಲ್ಲಾ ಮುಸ್ಲಿಯಾರ್ ವಂಡೂರು (ಖ.ಸಿ), ಕೆ.ವಿ.ಮುಹಮ್ಮದ್ ಮುಸ್ಲಿಯಾರ್ ಕೂಟ್ಟನಾಡ್ (ಖ.ಸಿ), ಸಮಸ್ತ ಮುಫ್ತಿಯಾಗಿದ್ದ ನಿರಮರುದೂರ್ ಮೀರಾನ್ ಕುಟ್ಟಿ ಮುಸ್ಲಿಯಾರ್ (ಖ.ಸಿ), ಪೂಚಕ್ಕಾಡ್ ಅಬೂಬಕ್ಕರ್ ಹಾಜಿ ಉಸ್ತಾದ್ (ಖ.ಸಿ), ಈ ಮಹಾತ್ಮರುಗಳು ಮೂಸಾ ಉಸ್ತಾದರ ಉಸ್ತಾದರುಗಳಾಗಿರುತ್ತಾರೆ. ಆತ್ಮೀಯ ಶಿಷ್ಯತ್ವ: ಶಂಶುಲ್ ಉಲಮಾ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ.ಸಿ),ಕೆ.ಕೆ. ಸ್ವದಖತುಲ್ಲಾ ಮುಸ್ಲಿಯಾರ್ ವಂಡೂರು (ಖ.ಸಿ),
ಇವರೊಂದಿಗೆ ಬಹಳ ಆತ್ಮೀಯ ಬಂಧವನ್ನು ಹೊಂದಿದ್ದರಲ್ಲದೆ ಇವರಿಂದ ಅನೇಕ ಇಜಾಝತ್’ಗಳನ್ನು ಪಡೆದುಕೊಂಡಿದ್ದರು, ಕೊನೆಯ ಘಳಿಗೆಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ (ತ.ಉ) ರನ್ನು ಕ್ಯಾಲಿಕಟ್ ಮರ್ಕಝ್ ಕಾಂಪ್ಲೆಕ್ಸ್ ನಲ್ಲಿ ಭೇಟಿಯಾಗಿ ಉಸ್ತಾದರಿಂದಲೂ ಕೆಲವು ಇಜಾಝತ್’ಗಳನ್ನು ಪಡೆದುಕೊಂಡಿದ್ದರು. ಉಪ್ಪಿನಂಗಡಿಯಲ್ಲಿ ಬಹುಮಾನ್ಯರಾದ ಪೂಚಕ್ಕಾಡ್ ಅಬೂಬಕ್ಕರ್ ಹಾಜಿ ಉಸ್ತಾದ್ ರವರ ದರ್ಸಿನಲ್ಲಿ ಕಲಿಯುತ್ತಿದ್ದ ಸಮಯದಲ್ಲಿ,ಅದು ನಲ್ವತ್ತಕ್ಕಿಂತಲೂ ಅಧಿಕ ಮುತಅಲ್ಲಿಂ ಗಳಿರುವ ದೊಡ್ಡ ದರ್ಸಾಗಿತ್ತು,ಅಲ್ಲಿ ಸುಮಾರು ಇಪ್ಪತ್ತರಷ್ಟು ಮುತಅಲ್ಲಿಂ ಗಳನ್ನು ಅಬೂಬಕ್ಕರ್ ಉಸ್ತಾದರು,ಸೀನಿಯರ್ ಮುತಅಲ್ಲಿಂ ಆದ ಮೂಸಾ ಉಸ್ತಾದರಿಗೆ ವಹಿಸಿಕೊಟ್ಟಿದ್ದರು,ಅವರಿಗೆ ಕಿತಾಬ್ ಹೇಳಿಕೊಡುವುದು,ಹಾಗೂ ಅವರ ಇತರ ಜವಾಬ್ದಾರಿಗಳನ್ನು ಮೂಸಾ ಉಸ್ತಾದರೇ ನಿರ್ವಹಿಸುತ್ತಿದ್ದರು.
ಆತ್ಮೀಯರಾಗಿದ್ದವರು: ಕಾಜೂರು ಮಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್,ಪೋಸೋಟ್ ತಂಙಳ್, ಫಖ್ರುದ್ದೀನ್ ತಂಙಳ್ ದುಗ್ಗಲಡ್ಕ,ಚೆರುಕುಂಞಿ ತಂಙಳ್,ಆಲಿಕುಂಞಿ ಉಸ್ತಾದ್,ಮಾಣಿ ಉಸ್ತಾದ್, ಶಿರಿಯ,ತಾಯಕ್ಕೋಡು ಉಸ್ತಾದ್,ಅಹ್ಮದ್ ಬಾವ ಉಸ್ತಾದ್, ಆಲಂಪಾಡಿ ಉಸ್ತಾದ್, ಎನ್.ಎಂ. ಉಸ್ತಾದ್, ಬೇಕಲ್ ಉಸ್ತಾದ್,ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಕಂಕನಾಡಿ ಇಸ್ಮಾಯಿಲ್ ಉಸ್ತಾದ್, ಪುಂಜಾಲಕಟ್ಟೆ ಉಸ್ತಾದ್,ಮಂಜನಾಡಿ ಅಬ್ಬಾಸ್ ಉಸ್ತಾದ್, ಅತ್ರಾಡಿ ಅಬೂಬಕ್ಕರ್ ಹಾಜಿ ಉಸ್ತಾದ್, ಸುರಿಬೈಲ್ ಉಸ್ತಾದ್, ಬೆಳ್ಳಿಪ್ಪಾಡಿ ಉಸ್ತಾದ್,ಖಾಸಿಂ ಉಸ್ತಾದ್ ಕುಂಬಳೆ, ಸಂಪ್ಯ ಉಸ್ತಾದ್, ಇವರೊಂದಿಗೆಲ್ಲ ಬಹಳ ಆತ್ಮೀಯರಾಗಿದ್ದರು, ಮಂಜನಾಡಿ ಅಬ್ಬಾಸ್ ಉಸ್ತಾದ್ ಉಜಿರೆಯಲ್ಲಿ ಮುದರ್ರಿಸ್ ಆಗಿದ್ದ ಸಮಯದಲ್ಲಿ,ಮೂಸಾ ಉಸ್ತಾದ್ ಮೂಡಿಗೆರೆಯಲ್ಲಿ ದರ್ಸ್ ನಡೆಸುತ್ತಿದ್ದರು.
ರಜೆಯಲ್ಲಿ ಊರಿಗೆ ಬಂದಾಗ ತನ್ನ ಆತ್ಮೀಯರಾದ ಅಬ್ಬಾಸ್ ಉಸ್ತಾದರ ಜೊತೆ ಪರಸ್ಪರ ಕಿತಾಬ್ ಚರ್ಚಿಸುತ್ತಿದ್ದರು,ಅದೇ ರೀತಿ ಮೂಸಾ ಉಸ್ತಾದ್ ಕಾಸರಗೋಡು ಜಿಲ್ಲೆಯ ‘ನಾಲಾಂ ಮೈಲ್’ನಲ್ಲಿ ಮುದರ್ರಿಸ್ ಆಗಿದ್ದ ಸಮಯದಲ್ಲಿ ಹತ್ತಿರದ ‘ನಾಯಿಮ್ಮಾರ್ ಮೂಲ’ಎಂಬಲ್ಲಿ ಎನ್.ಎಂ.ಉಸ್ತಾದರು ದರ್ಸ್ ನಡೆಸುತ್ತಿದ್ದರು,ಇಲ್ಲೂ ಕೂಡ ಎನ್.ಎಂ.ಉಸ್ತಾದ್ ಹಾಗೂ ಮೂಸಾ ಉಸ್ತಾದ್ ಸಮಯ ಸಿಕ್ಕಾಗಲೆಲ್ಲ ಪರಸ್ಪರ ಕಿತಾಬ್ ಚರ್ಚಿಸುತ್ತಿದ್ದರಂತೆ,ಕಿತಾಬ್ ಚರ್ಚೆಯಲ್ಲಿ ಉಸ್ತಾದರು ಬಹಳ ಆಸಕ್ತಿ ಉಳ್ಳವರಾಗಿದ್ದರು. ಸೇವೆ ಸಲ್ಲಿಸಿದ ಸ್ಥಳಗಳು: ದೇಲಂಪಾಡಿ, ಚೆಂಗಳ, ಕಕ್ಕಿಂಜೆ, ಮೂಡಿಗೆರೆ,ಮೊಗ್ರಾಲ್, ಪಾಣಾರ್’ಕುಳಂ, ನಾಲಾಂ ಮೈಲ್, ಮುಳ್ಳೇರಿಯ,ಬೈಕಂಪಾಡಿ,ಅಡ್ಕತ್ತಬೈಲ್ (ಕಾಸರಗೋಡು), ಅಜ್ಜಾವರ, ಚಿಕ್ಕಮಗಳೂರು ಸಂಗೀನ್ ಮಸ್ಜಿದ್.
ಕುಟುಂಬ: ಪತ್ನಿ : ಪ್ರಮುಖ ವಿದ್ವಾಂಸರೂ ಸೂಫಿವರ್ಯರೂ ಸಾತ್ವಿಕ ಆಲಿಂ ಕುಟುಂಬದಲ್ಲಿ ಜನಿಸಿದ ಕಕ್ಕಿಂಜೆ ಮಸೀದಿಯ ದೀರ್ಘ ಕಾಲದ ಖತೀಬರಾಗಿದ್ದ, ಬಹುಮಾನ್ಯರಾದ ಉಮರ್ ಮುಸ್ಲಿಯಾರ್ (ನ.ಮ), ಹಾಗೂ ಪವಿತ್ರ ಅಹ್ಲ್’ಬೈತ್ ಕುಟುಂಬದ ಸೈಯ್ಯಿದತ್ ಉಮ್ಮು ಹಬೀಬ ಬೀವಿ ಅಲ್ ಹಾದಿ (ನ.ಮ) ಇವರ ಮೂರನೇ ಮಗಳಾದ ಆಸಿಯ ಹಜ್ಜುಮ್ಮ.
ಹತ್ತು ಮಕ್ಕಳ ತುಂಬು ಕುಟುಂಬ, ಪ್ರಖ್ಯಾತ ವಾಗ್ಮಿಯೂ ಪ್ರಸಿದ್ದ ವಿದ್ವಾಂಸರೂ ಆದ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಉಸ್ತಾದ್ ಸಹಿತ ಆರು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು. ಅಳಿಯಂದಿರು: ಕಾಸರಗೋಡು ಜಿಲ್ಲೆಯ ಸಮಸ್ತ ಮುಶಾವರ ಉಪಾಧ್ಯಕ್ಷರೂ ಜಿಲ್ಲೆಯ ಪ್ರಮುಖ ಆತ್ಮೀಯ ನಾಯಕರೂ ಕಲ್ಲಕಟ್ಟ ‘ಮಜ್’ಮಅ್’ ಸಂಸ್ಥೆಯ ಸಾರಥಿಯೂ ಆಗಿರುವ ಅಸ್ಸೈಯ್ಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಮದನಿ,ಅಲ್ ಐದರೂಸ್ ಕಲ್ಲಕಟ್ಟ ಕಾಸರಗೋಡು, ಮುಹಮ್ಮದ್ ಕುಂಞಿ ಹಾಜಿ ಪಳ್ಳಂಗೋಡು,ಮುಹಮ್ಮದ್ ಸಖಾಫಿ ಕಾಜೂರು, ಸ್ವದಖತುಲ್ಲಾ ನದ್ವಿ ಮಾಣಿ (ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಪುತ್ರ).
ಅಭಿಲಾಶೆ: ದೀನಿ ಖಿದ್’ಮತ್’ನಲ್ಲಿ ಹಾಗೂ ಶುಕ್ರವಾರ ಮರಣಹೊಂದಲು ಉಸ್ತಾದರು ಯಾವಾಗಲೂ ದುಆ ಮಾಡುತ್ತಿದ್ದರು,ಉಸ್ತಾದರ ಆ ಎರಡು ಅಭಿಲಾಶೆಯನ್ನು ಅಲ್ಲಾಹು ಈಡೇರಿಸಿದ್ದಾನೆ, ಉಸ್ತಾದರ ವಫಾತ್: ಹಿಜರಿ 1422 ಸಫರ್ 17, ಶುಕ್ರವಾರ (ಮೇ 11, 2001) ಬೆಳಗ್ಗೆ , ತಾನು ಸೇವೆಯಲ್ಲಿದ್ದ ಚಿಕ್ಕಮಗಳೂರು ಸಂಗೀನ್ ಜುಮ್ಮಾ ಮಸೀದಿಯಲ್ಲಾಗಿತ್ತು, ಉಸ್ತಾದರಿಗೆ ಮರಣದ ಮುನ್ನ ಎದೆ ನೋವು ಹೆಚ್ಚಾದಾಗ ಸುತ್ತ ಸೇರಿದವರೊಂದಿಗೆ ಇದು ನನ್ನ ಕೊನೆಯ ಘಳಿಗೆ ನನ್ನ ಜೊತೆ ನೀವು ‘ಲಾಇಲಾಹ ಇಲ್ಲಲ್ಲಾಹ್’ ಹೇಳಿರಿ ಎಂದು ಹೇಳುತ್ತಾ ‘ಲಾಇಲಾಹ ಇಲ್ಲಲ್ಲಾಹ್’ ಎಂಬ ಪವಿತ್ರ ಕಲಿಮ ಜೋರಾಗಿಯೇ ಹೇಳಿ ಈ ನಶ್ವರ ಬದುಕಿಗೆ ಶಾಶ್ವತ ವಿದಾಯ ಕೋರಿದರು,
ಹಿಜರಿ 1446 ಸಫರ್ 17 ಶುಕ್ರವಾರ, (23/08/2024) ಈ ವರ್ಷಕ್ಕೆ ಉಸ್ತಾದರ ವಿಯೋಗಕ್ಕೆ 24 ವರ್ಷ ತುಂಬುತ್ತದೆ. ಕಕ್ಕಿಂಜೆ ಕೇಂದ್ರ ಜುಮಾ ಮಸೀದಿಯ ಹೃದಯ ಭಾಗದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಉಸ್ತಾದರ ಸ್ವರ್ಗೀಯ ದರಜ ಅಲ್ಲಾಹು ಉನ್ನತಿಗೇರಿಸಲಿ,ಅವರೊಂದಿಗೆ ನಮ್ಮನ್ನೂ ಸ್ವರ್ಗಲೋಕದಲ್ಲಿ ಒಂದುಗೂಡಿಸಲಿ,ಆಮೀನ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.